1888-1935. ಲಾರೆನ್ಸ್ ಆಫ್ ಅರೇಬಿಯ ಎಂದು ಪ್ರಸಿದ್ಧನಾಗಿದ್ದ ಬ್ರಿಟಿಷ್ ಯೋಧ ಹಾಗೂ ಬರೆಹಗಾರ. ಒಂದನೆಯ ಮಹಾಯುದ್ಧಕಾಲದ ಸಾಹಸೀವ್ಯಕ್ತಿಗಳಲ್ಲೊಬ್ಬ. ಈತ ವೇಲ್ಸ್‍ನ ಟ್ರೆಮಡಾಕ್‍ನಲ್ಲಿ ಜನಿಸಿದ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಚರಿತ್ರೆ ಹಾಗೂ ಪುರಾತತ್ವ ವಿಷಯಗಳನ್ನು ವ್ಯಾಸಂಗಮಾಡಿದ. ದೇಶಾಟನೆ ಮಾಡಿ ವಿಷಯ ಸಂಗ್ರಹಿಸುವುದರಲ್ಲಿ ಈತ ಚತುರನಾಗಿದ್ದ. ಸಿರಿಯ ದೇಶವನ್ನು ಕಾಲುನಡಿಗೆಯಲ್ಲಿಸುತ್ತಿದ. ಆ ಸಂದರ್ಭದಲ್ಲಿ ಈತ ಅರೇಬಿಕ್ ಭಾಷೆಯನ್ನು ಕಲಿತು, ಆ ಜನರ ಸ್ನೇಹಸಂಪಾದನೆ ಮಾಡಿದ.
 
ಒಂದನೆಯ ಮಹಾ ಯುದ್ಧ ಆರಂಭವಾಗುವ ವೇಳೆಯಲ್ಲಿ ಈತ ಬ್ರಿಟಿಷ್ ಪುರಾತತ್ತ್ವಜ್ಞನಾಗಿ ಕೆಲಸ ಮಾಡುತ್ತಿದ್ದ. ಇವನ ಜಾಣ್ಮೆ, ಚಾಣಾಕ್ಷತನ, ಪರಿಶ್ರಮ ಗಳನ್ನು ಗಮನಿಸಿ ಬ್ರಿಟಿಷ್ ಸರ್ಕಾರ ಇವನನ್ನು ಬ್ರಿಟಿಷ್ ಮಿಲಿಟರಿ ಬೇಹುಗಾರಿಕೆ ಪಡೆಯ ಮುಖ್ಯಸ್ಥನನ್ನಾಗಿ ನೇಮಿಸಿ ಈಜಿಪ್ಟ್‍ಗೆ ಕಳುಹಿಸಿತು. ಅನಂತರ ಈತ ಕರ್ನಲ್ ಹುದ್ದೆಗೇರಿದ. ತುರ್ಕಿಯ ವಿರುದ್ಧ ದಂಗೆ ಏಳುವಂತೆ ಅರಬ್ಬರನ್ನು ಪ್ರಚೋದಿಸಿದವನೂ ಅವರಿಗೆ ನೆರವು ನೀಡಿದವನೂ ಈತನೇ. ಗೆರಿಲ್ಲಾ ಯುದ್ಧತಂತ್ರದ ನೇತಾರನಾಗಿ ಈತ ಸಾಹಸಕೃತ್ಯಗಳನ್ನು ಕೈಗೊಂಡು ಯಶಸ್ವಿಯಾದ. ಇವನ ಬುದ್ಧಿವಂತಿಕೆ, ಮುತ್ಸದ್ಧಿತನಗಳಿಂದಾಗಿ ಅರಬ್ಬರು ತುರ್ಕಿಯನ್ನು  ಸೋಲಿಸಿ ಸಿರಿಯದ ರಾಜಧಾನಿ ಡಮಾಸ್ಕಸ್‍ಗೆ ಪ್ರವೇಶಿಸಿ ದರು. ಲಾರೆನ್ಸ್ ಅರಬ್ಬರ ಒಳಿತಿಗಾಗಿ, ಅವರ ವಿಮೋಚ ನೆಗಾಗಿ ಸದಾ ಹಂಬಲಿಸುತ್ತಿದ್ದ. ಅವರಿಗೆ ಸ್ವಾತಂತ್ರ್ಯ ನೀಡುವಂತೆ 1919ರಲ್ಲಿ ನಡೆದ ವರ್ಸಿಲೀಸ್ ಸಮ್ಮೇಳನದಲ್ಲಿ ಒತ್ತಾಯ ಪಡಿಸಿದ. 1921ರಲ್ಲಿ ಈತ ಬ್ರಿಟಿಷ್ ವಸಾಹತು ಕಚೇರಿಯ ಅರಬ್ಬೀವ್ಯವಹಾರ ಗಳ ಸಲಹೆಗಾರನಾಗಿ ನೇಮಕ ಹೊಂದಿದ. ಆದರೆ ತನ್ನ ಸರ್ಕಾರ ಅರಬ್ ನೆರವಿನ ವಿಷಯಗಳಲ್ಲಿ ಹಿಂದೇಟು ಹಾಕಿದ್ದರಿಂದ ಬೇಸರಗೊಂಡು ಆ ಹುದ್ದೆಗೆ ರಾಜಿನಾಮೆ ನೀಡಿದ. ಅನಂತರ ಜೆ.ಎಚ್.ರಾಸ್ ಎಂಬ ಹೊಸ ಹೆಸರನ್ನಿಟ್ಟುಕೊಂಡು ರಾಯಲ್ ಏರ್‍ಫೋರ್ಸ್‍ನಲ್ಲಿ (ಆರ್‍ಎಎಫ್) ಕೆಲಸಕ್ಕೆ ಸೇರಿದ. ಟಿ.ಇ.ಷಾ ಎಂದು ತನ್ನ ಹೆಸರನ್ನು ಬದಲಾಯಿಸಿ ಕೊಂಡು ಟ್ಯಾಂಕ್ ಪಡೆಗೆ ವರ್ಗಾವಣೆಗೊಂಡ. 1925ರಲ್ಲಿ ಪುನಃ ರಾಯಲ್ ಏರ್‍ಫೋರ್ಸ್‍ಗೆ ವಾಪಸಾದ. ಅನಂತರ ತನ್ನ ಹೆಸರನ್ನು ಟೆ.ಇ.ಷಾ ಎಂದು ಕಾನೂನು ಬದ್ಧಗೊಳಿಸಿಕೊಂಡ. ಈತ ಭಾರತದಲ್ಲೂ ಕೆಲಕಾಲ ಇದ್ದನಂತೆ. ಭಾರತದಲ್ಲಿದ್ದಾಗ ಪಠಾಣರೊಡನೆ ಓಡಾಡಿಕೊಂಡು ಅವರ ಹಾಗೆಯೇ ಬಾಳಿ ಅವರಲ್ಲಿ ಅಂತಃಕಲಹವನ್ನು ಬಿತ್ತಿದನೆಂಬ ಆಪಾದನೆಗೊಳಗಾದಾಗ ಬ್ರಿಟಿಷ್ ಸರ್ಕಾರ ಇವನನ್ನು ಇಂಗ್ಲೆಂಡ್‍ಗೆ ವಾಪಸು ಕರೆಯಿಸಿಕೊಂಡಿತಂತೆ. ಈತ 1935 ಮೇ 19ರಂದು ಮೋಟಾರ್ ಸೈಕಲ್ ಅಪಘಾತಕ್ಕೆ ಈಡಾಗಿ ನಿಧನನಾದ.
 
ಲಾರೆನ್ಸ್ ತನಗೆ ಕೊಡಮಾಡಿದ ಪ್ರಶಸ್ತಿ, ಪದವಿಗಳನ್ನೆಲ್ಲ ನಿರಾಕರಿಸಿದ. ಆದರೂ ಅರೇಬಿಯನರು ಪ್ರೀತಿಯಿಂದ ಈತನನ್ನು ‘ಅರೇಬಿಯದ ಅನಭಿಷಿಕ್ತ ದೊರೆ’ ಎಂದು ಕರೆದು ಗೌರವಿಸಿದರು. ಈತ ಅರೇಬಿಯದ ತನ್ನ ರೋಮಾಂಚಕಾರಿ ಅನುಭವಗಳನ್ನು ದಿ ಸೆವೆನ್ ಪಿಲ್ಲರ್ಸ್ ಆಫ್ ವಿಸ್‍ಡಮ್ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾನೆ (1926). ಈ ಪುಸ್ತಕದ ಸಂಗ್ರಹರೂಪ ‘ರಿವೋಲ್ಟ್ ಇನ್ ದಿ ಡೆಸರ್ಟ್’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ (1927). ಇವನ ಜೀವನ ಕಥೆಯನ್ನು ಆಧರಿಸಿ ಹಾಲಿವುಡ್‍ನ ಚಿತ್ರಸಂಸ್ಥೆಯೊಂದು ಲಾರೆನ್ಸ್ ಆಫ್ ಅರೇಬಿಯ ಎಂಬ ಇಂಗ್ಲಿಷ್ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರದಲ್ಲಿ ಹಾಲಿವುಡ್‍ನ ಪ್ರಸಿದ್ಧ ನಟ ಓಮರ್ ಶರೀಫ್ ಲಾರೆನ್ಸ್‍ನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾನೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ